ಪುನರಾವಲೋಕನ ಪಾಠ -
ಒಮ್ಮೆ ವ್ಯಾಸಂಗ ಮಾಡಿಮುಗಿಸಿದ ಪಾಠಭಾಗವನ್ನು ಸಮಗ್ರವಾಗಿ, ಒಟ್ಟಾರೆ ದೃಷ್ಟಿಯಿಂದ ಅವಲೋಕಿಸುವ ಪಾಠ ; ಇದನ್ನು ಸಾಮಾನ್ಯವಾಗಿ ಪುನರಾವರ್ತನ (ರಿಪಿಟಿಷನ್, ಡ್ರಿಲ್) ಪಾಠವೆಂದು ಕೆಲವರು ತಪ್ಪಾಗಿ ಭಾವಿಸುವುದುಂಟು. ಪುನರಾವರ್ತನ ಅಥವಾ ಆವರ್ತನ ಪಾಠದಲ್ಲಿ ಒಮ್ಮೆ ವ್ಯಾಸಂಗ ಮಾಡಿದ ಅಥವಾ ಬೋಧಿಸಿದ ಪಾಠವನ್ನು ದೃಢಪಡಿಸಿಕೊಳ್ಳುವ ಉದ್ದೇಶದಿಂದ ಮತ್ತೆಮತ್ತೆ ವ್ಯಾಸಂಗ ಮಾಡಲಾಗುವುದು. ಆಗ ಒಂದು ಆವೃತ್ತಿಯ ಪಾಠಕ್ಕೂ ಇನ್ನೊಂದು ಆವೃತ್ತಿಯ ಪಾಠಕ್ಕೂ ವ್ಯತ್ಯಾಸ ಇರುವುದಿಲ್ಲ. ಕೆಲವು ವೇಳೆಗಳಲ್ಲಿ ಯಾವುದಾದರೂ ತತ್ತ್ವ, ನಿಯಮ, ಸೂತ್ರ ಮುಂತಾದವನ್ನು ದೃಢಪಡಿಸಿಕೊಳ್ಳುವಾಗ ಕೇವಲ ಉದಾಹರಣೆಗೆ ಅಥವಾ ನಿದರ್ಶನಗಳನ್ನು ಮಾತ್ರ ಬದಲಾಯಿಸಲಾಗುವುದು. ಗಣಿತದ ಯಾವುದಾದರೂ ಸೂತ್ರವನ್ನು ದೃಢಪಡಿಸಿಕೊಳ್ಳಲು ಹಲವಾರು ಲೆಕ್ಕಗಳನ್ನು ಮಾಡಬಹುದು. ಆದರೆ, ಆ ಪಾಠ ಕೇವಲ ಆ ಸೂತ್ರವನ್ನು ದೃಢಪಡಿಸಿಕೊಳ್ಳಲು ಮಾತ್ರ. ಪುನರಾವಲೋಕನ ಪಾಠದಲ್ಲಾದರೆ ಹಿಂದೆ ಹಲವಾರು ಪಾಠಗಳನ್ನು ವ್ಯಾಸಂಗ ಮಾಡಿದ್ದರೂ ಆ ಒಂದೊಂದು ಪಾಠವನ್ನು ಮತ್ತೆ ತದ್ವತ್ತಾಗಿ ಪುನರಾವರ್ತಿಸದೆ ಆ ಎಲ್ಲ ಪಾಠಗಳ ಸಮಗ್ರವೂ ಸಾಪೇಕ್ಷವೂ ಆದ ಭಾಗಗಳನ್ನು ನೂತನ ರೀತಿಯ ಸಂಬಂಧ ಹೊರಬರುವ ರೀತಿಯಲ್ಲಿ ವ್ಯಾಸಂಗ ಮಾಡಲಾಗುವುದು. ಉದಾ: ಕರ್ಣನ ಕಥೆಯನ್ನು ಹಲವಾರು ಪಾಠಗಳಲ್ಲಿ ಪ್ರತ್ಯೇಕವಾಗಿ ಇಡೀ ವರ್ಷದಲ್ಲಿ ವ್ಯಾಸಂಗ ಮಾಡಿ ಮುಗಿಸಿದ್ದು ಕೊನೆಯಲ್ಲಿ ಆ ಎಲ್ಲ ಪಾಠಗಳಲ್ಲೂ ಕಂಡುಬರುವ ಸಂಬಂಧಿಸಿದಂಥ ಭಾಗಗಳನ್ನು ಆರಿಸಿಕೊಂಡು ಅವನ ಪಾತ್ರ ಅಥವಾ ಗುಣ ಮುಂತಾದ ಅಂಶಗಳ ಮೇಲೆ ಕೇಂದ್ರೀಕರಿಸಿ ನಡೆಸುವ ವ್ಯಾಸಂಗ. ಸಾಮಾನ್ಯವಾಗಿ ಪಾಠ ಭಾಗವನ್ನೆಲ್ಲ ಮುಗಿಸಿದ ಮೇಲೆ ವರ್ಷದ ಕೊನೆಯಲ್ಲಿ ಅಧ್ಯಾಪಕರು ಕೆಲವು ಕಾಲಾವಧಿಯಲ್ಲಿ (ಪೀರಿಯಡ್) ಮಾಡಿರುವ ಸಮಗ್ರ ಪಾಠವನ್ನು ಪುನರಾವಲೋಕನ ಮಾಡುವರು. ಆದ್ದರಿಂದ ವಿದ್ಯಾರ್ಥಿಗಳಿಗೆ ತಾವು ಬೇರೆ ಬೇರೆ ಪಾಠಗಳಲ್ಲಿ ಕಲಿತ ಅಂಶಗಳ ಬಗ್ಗೆ ಹೊಸ ಬೆಳಕು, ಹೊಸ ದೃಷ್ಟಿಕೋನ ಮೂಡುವಂತಾಗುತ್ತದೆ. 

ಶಾಲಾ ಕಾಲೇಜುಗಳಲ್ಲಿ ಪುನರಾವಲೋಕನ ಪಾಠಗಳಿಗೆ ಅವಕಾಶ ಕಲ್ಪಿಸಿದ್ದರೂ ಅದು ಕೇವಲ ಪುನರಾವರ್ತನ ಪಾಠವೆಂಬ ತಪ್ಪು ಕಲ್ಪನೆಯ ಫಲವಾಗಿ ಅನುಪಯುಕ್ತವಾಗಿದೆ. ಆಯಾ ವಿಷಯದ ಅಧ್ಯಾಪಕರು ಪಾಠ ಭಾಗವೆಲ್ಲ ಮುಗಿದಿದ್ದರೆ ಪುನರಾವಲೋಕವನ್ನು ಒಂದೆರಡು ಕಾಲಾವಧಿಯಲ್ಲಿ ಮಾಡಲು ಯತ್ನಿಸುವರು. ಹಿಂದೆ ಮಾಡಿರುವ ಎಲ್ಲ ಪಾಠಗಳನ್ನೂ ಅಷ್ಟು ಅಲ್ಪ ಸಮಯದಲ್ಲಿ ಮುಗಿಸಲಾಗುವುದಿಲ್ಲ. ಆದ್ದರಿಂದ ಅವರು ಕೆಲವು ಪಾಠಗಳಿಗೆ ಸಂಬಂಧಿಸಿದ ವಿಷಯವನ್ನು ಮಾತ್ರ ಪುನರಾವರ್ತಿಸಲು ಯತ್ನಿಸುವರು. ಹಾಗೆ ಮಾಡುವಾಗ ಯಾವ ಪಾಠವನ್ನು ಆರಿಸಿಕೊಳ್ಳಬೇಕು ಎಂಬುದನ್ನು ತೀರ್ಮಾನಿಸುವಾಗ ಪರೀಕ್ಷೆಯ ದೃಷ್ಟಿ ಮುಖ್ಯವಾಗುತ್ತದೆ. ಕಳೆದ ಪರೀಕ್ಷೆಯಲ್ಲಿ ಕೇಳಿರುವ ಭಾಗಗಳನ್ನು ಬಿಟ್ಟು ಇನ್ನುಳಿದ ಭಾಗಗಳಲ್ಲಿ ಪ್ರಶ್ನೆಗಳು ಬರಬಹುದೆಂದು ಊಹಿಸಿ ಆ ಭಾಗಗಳನ್ನು ಮಾತ್ರ ಪುನರಾವರ್ತಿಸುವರು. ಆದ್ದರಿಂದ ವಿಷಯದ ಸಮಗ್ರ ಪುನರಾವಲೋಕವ ಸ್ವಾಭಾವಿಕವಾಗಿ ಸಾಧ್ಯವಾಗಲಾರದು ಎಂದ ಮೇಲೆ ಪಾಠ ವಿಷಯದ ಪುನರಾವಲೋಕನಕ್ಕೆ ಮೀಸಲಾದಾಗ ಮಾತ್ರ ವಿದ್ಯಾರ್ಥಿಗಳಿಗೆ ಅದರಿಂದ ಉದ್ದೇಶಿಸಿದ ಫಲ ದೊರಕುವಂತಾಗುತ್ತದೆ : 

ಪುನರಾವಲೋಕನ ಪಾಠ ಸಾಹಿತ್ಯ, ಇತಿಹಾಸ, ಭೂವಿವರಣೆ, ಪೌರನೀತಿ ಮುಂತಾದ ವಿಷಯಗಳಲ್ಲಿ ಯಶಸ್ವಿಯಾಗುತ್ತದೆ.

ಸಾಮಾನ್ಯ ಪಾಠಕ್ಕೆ ಬೇಕಾದ ಪೂರ್ವಸಿದ್ಧತೆ ಪುನರಾವಲೋಕನ ಪಾಠಕ್ಕೆ ಅನಗತ್ಯವೆಂದು ಕೆಲವರು ಭಾವಿಸುವುದುಂಟು. ಇದಕ್ಕೆ ಅವರ ಮನಸ್ಸಿನಲ್ಲಿ ಅದನ್ನು ಪುನಃ ಪುನರಾವರ್ತನಪಾಠಕ್ಕೆ ಸಮೀಕರಿಸಿಕೊಂಡಿರುವುದೇ ಮುಖ್ಯ ಕಾರಣ. ಪುನರಾವಲೋಕನ ಪಾಠದ ಉದ್ದೇಶ ಮನದಟ್ಟಾದರೆ ಅವರು ಆ ಪಾಠಕ್ಕೆ ಸಾಮಾನ್ಯ ಪಾಠಕ್ಕಿಂತ ಹೆಚ್ಚಿನ ಸಿದ್ಧತೆ ಮಾಡಿಕೊಳ್ಳಬೇಕಾಗುವುದನ್ನು ಮನಗಾಣುವರು. ಅಷ್ಟೇ ಅಲ್ಲ ಪುನರಾವಲೋಕನ ಪಾಠಕ್ಕೆ ನಿರ್ದಿಷ್ಟ ಕ್ರಮವನ್ನು ಅನುಸರಿಸಬೇಕಾಗುವ ಅಂಶವನ್ನು ಅರಿತುಕೊಳ್ಳುವರು.

ಮಾಡಿರುವ ಪಾಠದ ವಿಷಯದಲ್ಲಿ ಪುನರಾವಲೋಕನಕ್ಕೆ ಆರಿಸಿಕೊಳ್ಳಬೇಕಾದ ಅಂಶಗಳನ್ನು ಅಧ್ಯಾಪಕರು ಮೊದಲು ನಿರ್ಧರಿಸಬೇಕು. ಆ ಅಂಶಗಳು ಆಯಾಯ ಸನ್ನಿವೇಶದ ಪುನರಾವರ್ತನೆಯಾಗುವುದರ ಜೊತೆಗೆ ಅವೆಲ್ಲದರ ಸಮಗ್ರತೆಯನ್ನು ಹೊರಮೂಡಿಸುವಂತಿರಬೇಕು. ಅನಂತರ ಅಧ್ಯಾಪಕರು ಮಾಡಿರುವ ಇಡೀ ವಿಷಯ ಭಾಗದಿಂದ ಆ ಅಂಶಕ್ಕೆ ಸಂಬಂಧಿಸಿದ ಸನ್ನಿವೇಶಾದಿ ಮುಖ್ಯಾಂಶಗಳನ್ನು ಸಂಗ್ರಹಿಸಿಕೊಳ್ಳಬೇಕು. ಇದಿಷ್ಟು ಅವರ ಪಾಠಕ್ಕೆ ಪೂರ್ವ ಸಿದ್ಧತೆಯಾಗುತ್ತದೆ. ಪಾಠ ಮಾಡುವಾಗ ಆಯಾ ಅಂಶಕ್ಕೆ (ಪಾತ್ರ ಪರಿಚಯ, ಸನ್ನಿವೇಶ ನಿರೂಪಣೆ, ಕಥಾ ಸಂವಿಧಾನ), ಸಂಬಂಧಿಸಿದಂತೆ ಆರಿಸಿರುವ ಎಳೆಗಳನ್ನು ಹೊಂದಿಸಿಕೊಂಡು ವಿದ್ಯಾರ್ಥಿಗಳ ಮನಸ್ಸಿನಲ್ಲಿ ಅದರ ಬಗ್ಗೆ ಒಂದು ಸಮಗ್ರ ಚಿತ್ರ ಮೂಡುವಂತೆ ಓದಿಸಬೇಕು. ಪಾಠದ ವಿಷಯವನ್ನು ಇಡೀ ವರ್ಷದಲ್ಲಿ ವಿವರವಾಗಿ, ಪ್ರತ್ಯೇಕವಾಗಿ ಬೋಧಿಸಿರುವುದರಿಂದ ವ್ಯಾಕರಣಾದಿ ಅಂಶಗಳನ್ನು ವಿವರಿಸುವ ಅಗತ್ಯ ಒದಗುವುದಿಲ.್ಲ												(ಎನ್.ಎಸ್.ವಿ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ